ಡೇನಿಷ್ ಈಸ್ಟ್ ಇಂಡಿಯ ಕಂಪನಿ -
	ಹದಿನಾರನೆಯ ಶತಮಾನದ ಕೊನೆಯ ಭಾಗದಲ್ಲಿ ಐರೋಪ್ಯ ರಾಷ್ಟ್ರಗಳು ಪೂರ್ವದ ದೇಶಗಳೊಂದಿಗೆ ವ್ಯಾಪಾರ ಸಂಪರ್ಕ ಬೆಳೆಸಲು ಯತ್ನಿಸುತ್ತಿದ್ದುವು. ಅವುಗಳ ಗಮನವನ್ನು ವಿಶೇಷವಾಗಿ ಸೆಳೆದಿದ್ದ ದೇಶವೆಂದರೆ ಭಾರತ. ಕೆಲವು ಪಾಶ್ಚಾತ್ಯ ವ್ಯಾಪಾರೀ ಸಂಸ್ಥೆಗಳು ತಂತಮ್ಮ ಸರ್ಕಾರಗಳ ಸನ್ನದು ಪಡೆದು ವ್ಯಾಪಾರ ನಡೆಸುತ್ತಿದ್ದುವು. ಅವು ಲಾಭಕರವಾಗಿ ವ್ಯವಹಾರ ನಡೆಸುತ್ತಿದ್ದುವು. ಇದರಿಂದ ಉತ್ತೇಜಿತರಾಗಿ ಡೇನರೂ ವ್ಯಾಪಾರ ಸಂಸ್ಥೆ ಸ್ಥಾಪಿಸಿದರು. ಇದೇ ಡೇನಿಷ್ ಈಸ್ಟ್ ಇಂಡಿಯ ಕಂಪನಿ. 

	ಡೆನ್ಮಾರ್ಕಿನ ದೊರೆ 4ನೆಯ ಕ್ರಿಶ್ಚನನಿಂದ 1616ರಲ್ಲಿ ಇದಕ್ಕೆ ಒಪ್ಪಿಗೆ ದೊರೆಯಿತು. ಆಗ ಸಿಂಹಳದಲ್ಲಿ (ಶ್ರೀಲಂಕಾ) ಪೋರ್ಚುಗೀಸರು ಪ್ರಬಲರಾಗಿದ್ದರು. ಕ್ಯಾಂಡಿಯ ದೊರೆ ಡೇನರ ಸಹಾಯವನ್ನು ಪಡೆದು ಪೋರ್ಚುಗೀಸರನ್ನು ಅಲ್ಲಿಂದ ಹೊರದೂಡಲು ಯೋಚಿಸಿ ಅವರನ್ನು ತನ್ನ ರಾಜ್ಯಕ್ಕೆ ಬರಮಾಡಿಕೊಂಡ. ಅವನ ಇಚ್ಛೆಯಂತೆ ಸಿಂಹಳದಲ್ಲಿ ಒಂದು ಡೇನಿಷ್ ವಸಾಹತವನ್ನು ನಿರ್ಮಿಸುವ ಯೋಜನೆಯನ್ನು 1618ರಲ್ಲಿ ಜಾರಿಗೆ ತರಲಾಯಿತು. ಈ ಯೋಜನೆಯಂತೆ 1618ರಲ್ಲಿ ಡೇನರು ಒಂದು ನೌಕೆಯನ್ನು ಸಿಂಹಳಕ್ಕೆ ಕಳುಹಿಸಿದರು. ಈ ನೌಕೆ ಸುರಕ್ಷಿತವಾಗಿ ಸಿಂಹಳದ ರೇವನ್ನು ಮುಟ್ಟಿ, ಡೇನರ ಒಂದು ಬೃಹತ್ತ ನೌಕಾಪಡೆ ಈ ದ್ವೀಪದತ್ತ ಸಾಗಿ ಬರುತ್ತಿದೆ ಎಂಬ ಸುದ್ದಿಯನ್ನು ತಿಳಿಸಿ ಅಲ್ಲಿಂದ ಕೋರಮಂಡಲ ತೀರದತ್ತ ತೆರಳಿತು. 

	ಅಲ್ಲಿ ಪೋರ್ಚುಗೀಸರು ಈ ನೌಕೆಯನ್ನು ತಡೆಗಟ್ಟಿದರು. ಹೋರಾಟ ನಡೆಯಿತು. ನೌಕೆಯ ನಾಯಕ ರೋಯ್ಲೆಂಟ್ ಕ್ರೇಪ್ ತಂಜಾವೂರಿನ ರಾಜನಲ್ಲಿ ಡೇನರಿಗೆ ರಕ್ಷಣೆಯನ್ನು ಕೋರಿದ. ತಂಜಾವೂರಿನ ದೊರೆ ರಘುನಾಥ ನಾಯಕ ಅವನನ್ನು ಬರಮಾಡಿಕೊಂಡು ಆಶ್ರಯ ಕೊಟ್ಟ. ಟ್ರ್ಯಾಂಕುಬಾರ್ ಎಂಬ ರೇವು ಪಟ್ಟಣ ಡೇನರಿಗೆ ದೊರಕಿತು. 

	ಡೇನಿಷ್ ಈಸ್ಟ್ ಇಂಡಿಯ ಕಂಪನಿ ಭಾರತದಲ್ಲಿ ಕೊನೆಗೂ ಒಂದು ನೆಲೆಯನ್ನು ಪಡೆಯಿತು. ಅಲ್ಲಿ ಅದು ಡ್ಯಾನ್ಸ್‍ಬರ್ಗ್ ಎಂಬ ಕೋಟೆಯನ್ನು ನಿರ್ಮಾಣ ಮಾಡಿ ಅದರ ರಕ್ಷಣೆಗಾಗಿ ಹೆಂಡ್ರಿಕ್ ಹೆಸ್ ಎಂಬುವನನ್ನು ನೇಮಿಸಿತು. ಇವನ ಸಹಾಯಕ್ಕೆ 23 ಮಂದಿಯ ರಕ್ಷಣಾದಳವನ್ನು ಕೊಟ್ಟು ಕೆಲವು ಫಿರಂಗಿಗಳನ್ನೂ ಒದಗಿಸಿತು. ಡೇನರ ಕೋಠಿಗಳು ಇಲ್ಲಿ ಪ್ರಾರಂಭವಾದುವು. 

	ಟ್ರ್ಯಾಂಕುಬಾರ್‍ನಲ್ಲಿ ನೆಲೆಗೊಂಡ ಡೇನಿಷ್ ಈಸ್ಟ್ ಇಂಡಿಯ ಕಂಪನಿಯ ವ್ಯಾಪಾರ ಮುಂದೆ ಮಚಲಿಪಟ್ಟಣದವರೆಗೂ ಮುಂದುವರಿಯಿತು. ಆದರೆ ಸ್ವದೇಶದಿಂದ ಸಾಕಷ್ಟು ಸಹಾಯ ದೊರೆಯುತ್ತಿರಲಿಲ್ಲವಾದ್ದರಿಂದ ಡೇನರು ಬಹಳ ಕಾಲ ಭಾರತದಿಂದ ಸರಕುಗಳನ್ನು ಮ್ಯಾಕಸ್ಸಾರ್ ಮತ್ತು ಮಲಯ ದ್ವೀಪ ಸ್ತೋಮಗಳಿಗೆ ರವಾನಿಸುವುದರಲ್ಲಿಯೇ ತೃಪ್ತರಾಗಬೇಕಾಯಿತು. ಕೆಲವೊಮ್ಮೆ ಅವರು ತಮ್ಮ ಮುಖ್ಯ ನೆಲೆಯಾದ ಟ್ರ್ಯಾಂಕುಬಾರನ್ನು ಇಂಗ್ಲಿಷರಿಗೋ ಡಚ್ಚರಿಗೋ ಬಿಟ್ಟುಕೊಟ್ಟು ಭಾರತದಲ್ಲಿ ತಮ್ಮ ವ್ಯಾಪಾರವನ್ನು ಮುಗಿಸಬೇಕಾದಂಥ ಪರಿಸ್ಥಿತಿಯೂ ಉದ್ಭವಿಸಿತ್ತು. 

	1670ರಲ್ಲಿ ಒಂದು ನೂತನ ಕಂಪನಿ ಪ್ರಾರಂಭವಾಯಿತು. ಸುಮರು 30 ವರ್ಷಗಳ ಅನಂತರ ಈ ನೂತನ ಕಂಪನಿಗೆ ಸರ್ಕಾರದ ಸನ್ನದು ದೊರಕಿತು. ಇದರ ವ್ಯಾಪಾರವೂ ವೃದ್ಧಿ ಹೊಂದಲಿಲ್ಲ. ಬಂಗಾಳದಲ್ಲಿ ನಿರ್ಮಿಸಲಾಗಿದ್ದ ಕಾರ್ಖಾನೆಗಳನ್ನು 1714ರಲ್ಲಿ ಮುಚ್ಚಲಾಯಿತು. 

	1729ರಲ್ಲಿ ಪ್ರಾರಂಭವಾದ ಮತ್ತೊಂದು ಕಂಪನಿ 1732ರಲ್ಲಿ ಡೇನಿಷ್ ಸರ್ಕಾರದಿಂದ ಸನ್ನದು ಪಡೆಯಿತು. ನಲವತ್ತು ವರ್ಷಗಳ ಕಾಲ ವ್ಯಾಪಾರ ಮುಂದುವರಿಸುವ ಹಕ್ಕು ಇದಕ್ಕೆ ದೊರಕಿತು. ಈ ಅವಧಿಯನ್ನು ಮುಂದೆ 1792ರವರೆವಿಗೂ ವಿಸ್ತರಿಸಲಾಯಿತು. 1755ರಲ್ಲಿ ಬಂಗಾಳದಲ್ಲಿ ಹೂಗ್ಲಿ ನದಿಯ ದಡದಲ್ಲಿದ್ದ ಸೆರಾಂಪುರದಲ್ಲಿ ಹೊಸ ನೆಲೆಯೊಂದು ಸ್ಥಾಪಿತವಾಯಿತು. ಇದರೊಂದಿಗೆ ಮಲಬಾರ್ ತೀರದಲ್ಲೂ ನಿಕೋಬಾರ್ ದ್ವೀಪಗಳಲ್ಲೂ ಈ ಕಂಪನಿ ಶಾಖೆಗಳನ್ನು ತೆರೆಯಿತು. ಡೇನರ ಮುಖ್ಯ ವ್ಯಾಪಾರ ನಡೆಯುತ್ತಿದ್ದದ್ದು ಚೀನದೊಂದಿಗೆ. ಅಲ್ಲಿನ ಚಹ ಸೊಪ್ಪನ್ನು ಕಳ್ಳತನದಿಂದ ಡೆನ್ಮಾರ್ಕಿಗೆ ಸಾಗಿಸಿ ಅಲ್ಲಿಂದ ಗ್ರೇಟ್ ಬ್ರಿಟನ್ನಿಗೆ ಒಯ್ಯಲಾಗುತ್ತಿತ್ತು. ಇದರಿಂದ ಅವರಿಗೆ ಅಪರಿಮಿತ ಲಾಭ ದೊರಕುತ್ತಿತ್ತು. ಆದರೆ ಕೆಲವು ವರ್ಷಗಳ ಅನಂತರ ಚಹದ ಮೇಲಿನ ಸುಂಕ ಕಡಿಮೆಯಾದಾಗ ಸರಬರಾಜು ಅಧಿಕವಾಗಿ ಡೇನರ ವ್ಯಾಪಾರ ಇಳಿಮುಖವಾಯಿತು. 

	1801ರಲ್ಲಿ ಇಂಗ್ಲೆಂಡ್ ಹಾಗೂ ಡೆನ್ಮಾರ್ಕ್‍ಗಳ ನಡುವೆ ವಿರಸವುಂಟಾಯಿತು. ಬಂಗಾಳದಲ್ಲಿದ್ದ ಸೆರಾಂಪುರ ಹಾಗೂ ದಕ್ಷಿಣ ಭಾರತದ ಟ್ರ್ಯಾಂಕುಬಾರ್‍ನ ಡೇನಿಷ್ ನೆಲೆಗಳನ್ನು ಇಂಗ್ಲಿಷರು ವಶಪಡಿಸಿಕೊಂಡರು. ಮುಂದೆ ಏಮಿಯನ್ಸ್ ಕೌಲಿನಂತೆ ಈ ನೆಲೆಗಳನ್ನು ಡೇನರಿಗೆ ಹಿಂದಿರುತಿಸಲಾಯಿತು. ಆರು ವರ್ಷಗಳ ತರವಾಯ ಯುದ್ಧ ಮತ್ತೆ ಆರಂಭವಾಯಿತು. ಈ ಎರಡೂ ನೆಲೆಗಳು ಅವರ ಕೈತಪ್ಪಿದುವು. ಯುದ್ಧ ಅಂತ್ಯಗೊಂಡು ಶಾಂತಿ ಒಪ್ಪಂದವಾದ ಅನಂತರ ಅವನ್ನು ಡೇನರು ಮರಳಿ ಪಡೆದರು. ಆದರೂ ಭಾರತದಲ್ಲಿ ಡೇನರು ಪ್ರಬಲರಾಗಲು ಸ್ವದೇಶದಿಂದ ಬೇಕಾದ ಸಹಾಯ ಒದಗಿ ಬರಲಿಲ್ಲ. ಆದ್ದರಿಂದ ಡೇನಿಷ್ ಈಸ್ಟ್ ಇಂಡಿಯ ಕಂಪನಿ ದುರ್ಬಲವಾಗಿಯೇ ಮುಂದುವರಿದಿತ್ತು. ಮಹದಾಶೆಗಳಿಂದ ಕೂಡಿದ್ದ ಪ್ರಬಲ ಶತ್ರುಗಳ ಚಟುವಟಿಕೆಗಳಿಂದಾಗಿ ಈ ದುರ್ಬಲ ಸಂಸ್ಥೆ ತಲೆಯೆತ್ತುವುದು ದುಸ್ತರವಾಯಿತು. ಆ ವೇಳೆಗೆ ನಿರ್ವೀರ್ಯರಾಗಿದ್ದ ಡೇನರು ಟ್ರ್ಯಾಂಕುಬಾರ್, ಸೆರಾಂಪುರ, ಬಲಸೋರ್ ಬಿಳಿಯಿದ್ದ ಪ್ರದೇಶ ಮುಂತಾಗಿ ತಮ್ಮ ಎಲ್ಲ ವಸಾಹತುಗಳನ್ನೂ ಕಾರ್ಖಾನೆಗಳನ್ನೂ 1845ರಲ್ಲಿ ಇಂಗ್ಲಿಷ್ ಈಸ್ಟ್ ಇಂಡಿಯ ಕಂಪನಿಗೆ ಹನ್ನೆರಡೂವರೆ ಲಕ್ಷ ರೂಪಾಯಿಗಳಿಗೆ ವಿಕ್ರಯಿಸಿದರು. ಡೇನಿಷ್ ಈಸ್ಟ್ ಇಂಡಿಯ ಕಂಪನಿಯ ಚಟುವಟಿಕೆಗಳು ಭಾರತದಲ್ಲಿ ಅಂತ್ಯಗೊಂಡುವು.							(ಎಂ.ಎನ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ